ಕೋಲ್ಕತ: ಮಾಜಿ ನಾಯಕ ಹಾಗೂ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (101* ರನ್, 121 ಎಸೆತ, 10 ಬೌಂಡರಿ) ಬಹುನಿರೀಕ್ಷಿತ ಏಕದಿನ ಕ್ರಿಕೆಟ್ ವಿಶ್ವದಾಖಲೆಯ 49ನೇ ಶತಕವನ್ನು 35ನೇ ಜನ್ಮದಿನದಂದೇ ಸಿಡಿಸಿ ಟೀಮ್ ಇಂಡಿಯಾಗೆ ತವರಿನ ಏಕದಿನ ವಿಶ್ವಕಪ್ನಲ್ಲಿ ಅಜೇಯ ಗೆಲುವಿನ ಓಟವನ್ನು ಸತತ 8ನೇ ಪಂದ್ಯಕ್ಕೆ ವಿಸ್ತರಿಸಲು ನೆರವಾದರು. ಬಲಿಷ್ಠ ದಕ್ಷಿಣ ಆಫ್ರಿಕಾ ಎದುರು ಈಡನ್ ಗಾರ್ಡನ್ಸ್ನಲ್ಲಿ ನಡೆದ ಪಂದ್ಯದಲ್ಲಿ ಆಲ್ರೌಂಡರ್ ರವೀಂದ್ರ ಜಡೇಜಾ (33ಕ್ಕೆ 5) ಮಾರಕ ದಾಳಿಯ ಬಲವನ್ನೂ ಪಡೆದ ಆತಿಥೇಯ ಭಾರತ ತಂಡ 243 ರನ್ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಸತತ 8ನೇ ಜಯದೊಂದಿಗೆ ರೋಹಿತ್ ಶರ್ಮ ಪಡೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿದೆ.
ಭಾನುವಾರದ ಬಲಿಷ್ಠರ ಕಾದಾಟದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ಗೆ ಇಳಿದ ಭಾರತ, ನಾಯಕ ರೋಹಿತ್ ಶರ್ಮ ಒದಗಿಸಿದ ಬಿರುಸಿನ ಆರಂಭ, ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ (77 ರನ್, 87 ಎಸೆತ, 7 ಬೌಂಡರಿ, 2 ಸಿಕ್ಸರ್) ಜೋಡಿಯ ಉಪಯುಕ್ತ ಜತೆಯಾಟದಿಂದ 5 ವಿಕೆಟ್ಗೆ 326 ರನ್ಗಳ ಸವಾಲಿನ ಮೊತ್ತ ಕಲೆಹಾಕಿತು. ಪ್ರತಿಯಾಗಿ ಜಡೇಜಾ ಸ್ಪಿನ್ ದಾಳಿಗೆ ನಲುಗಿ ಚೇಸಿಂಗ್ನಲ್ಲಿ ಸಂಪೂರ್ಣವಾಗಿ ಮುಗ್ಗರಿಸಿದ ದಕ್ಷಿಣ ಆಫ್ರಿಕಾ 27.1 ಓವರ್ಗಳಲ್ಲಿ ಕೇವಲ 83 ರನ್ಗಳಿಗೆ ಸರ್ವಪತನ ಕಂಡಿತು. ಈ ಪಂದ್ಯಕ್ಕೆ ಮೊದಲೇ ಸೆಮಿೈನಲ್ ಪ್ರವೇಶವನ್ನು ಖಚಿತಪಡಿಸಿಕೊಂಡಿದ್ದ ಟೆಂಬಾ ಬವುಮಾ ಪಡೆ, ಟೂರ್ನಿಯಲ್ಲಿ 2ನೇ ಸೋಲು ಅನುಭವಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲೇ ಉಳಿಯಿತು.
ಕೊಹ್ಲಿ ಭಾರತದಲ್ಲಿ 6 ಸಾವಿರ ರನ್
ವಿರಾಟ್ ಕೊಹ್ಲಿ ಭಾರತದಲ್ಲಿ ನಡೆದ ಏಕದಿನ ಪಂದ್ಯಗಳಲ್ಲಿ ಆರು ಸಾವಿರ ರನ್ಗಳಿಸಿದ ಎರಡನೇ ಬ್ಯಾಟರ್ ಎನಿಸಿದರು. ಕೊಹ್ಲಿ 119 ಇನಿಂಗ್ಸ್ಗಳಲ್ಲಿ ಸಾಧಿಸಿದರೆ. ಸಚಿನ್ ತೆಂಡುಲ್ಕರ್ 160 ಇನಿಂಗ್ಸ್ಗಳಲ್ಲಿ 6,974 ರನ್ ಕಲೆಹಾಕಿದ್ದಾರೆ.
3: ವಿರಾಟ್ ಕೊಹ್ಲಿ (543) ವಿಶ್ವಕಪ್ ಆವೃತ್ತಿಯೊಂದರಲ್ಲಿ 500 ಪ್ಲಸ್ ರನ್ಗಳಿಸಿದ 3ನೇ ಭಾರತೀಯ ಎನಿಸಿದರು. ಸಚಿನ್ ತೆಂಡುಲ್ಕರ್, ರೋಹಿತ್ ಶರ್ಮ ಮೊದಲಿಬ್ಬರು.
2: ರವೀಂದ್ರ ಜಡೇಜಾ ಏಕದಿನ ವಿಶ್ವಕಪ್ನಲ್ಲಿ 5 ವಿಕೆಟ್ ಗೊಂಚಲು ಗಳಿಸಿದ 2ನೇ ಭಾರತೀಯ ಸ್ಪಿನ್ನರ್. ಯುವರಾಜ್ ಸಿಂಗ್ 2011ರಲ್ಲಿ ಐರ್ಲೆಂಡ್ ಎದುರು ಈ ಸಾಧನೆ ಮಾಡಿದ ಮೊದಲಿಗರೆನಿಸಿದ್ದರು.
*1: ಮಾರ್ಕೋ ಜಾನ್ಸೆನ್ (94ಕ್ಕೆ 1) ಏಕದಿನ ವಿಶ್ವಕಪ್ನಲ್ಲಿ ದಕ್ಷಿಣ ಆಫ್ರಿಕಾದ ದುಬಾರಿ ಬೌಲರ್ ಎನಿಸಿದರು. ಹಾಲಿ ಆವೃತ್ತಿಯಲ್ಲಿ ಶ್ರೀಲಂಕಾ ಎದುರು 92 ರನ್ ಬಿಟ್ಟುಕೊಟ್ಟಿದ್ದರು.
*83: ದಕ್ಷಿಣ ಆಫ್ರಿಕಾ ಏಕದಿನ ಕ್ರಿಕೆಟ್ನಲ್ಲಿ ದಾಖಲಿಸಿದ 2ನೇ ಕನಿಷ್ಠ ಮೊತ್ತ ಇದಾಗಿದೆ. 1993ರಲ್ಲಿ ಆಸೀಸ್ ಎದುರು 69 ರನ್ಗಳಿಗೆ ಆಲೌಟ್ ಆಗಿತ್ತು.
1. ರೋಹಿತ್ ಶರ್ಮ(58) ಏಕದಿನ ಕ್ರಿಕೆಟ್ನಲ್ಲಿ ಒಂದೇ ವರ್ಷದಲ್ಲಿ ಹೆಚ್ಚು ಸಿಕ್ಸರ್ ಸಿಡಿಸಿದ ದಕ್ಷಿಣ ಆಫ್ರಿಕಾದ ಎಬಿ ಡಿಲಿವಿಯರ್ಸ್ (58) ದಾಖಲೆ ಸರಿಗಟ್ಟಿದರು. ಎಬಿಡಿ 2013ರಲ್ಲಿ ಸಾಧಿಸಿದ್ದರು.
4: ವಿರಾಟ್ ಕೊಹ್ಲಿ ಏಕದಿನ ವಿಶ್ವಕಪ್ನಲ್ಲಿ ಆರಂಭಿಕನಲ್ಲದೇ ಹೆಚ್ಚು ಶತಕಗಳಿಸಿದ ರಿಕಿ ಪಾಂಟಿಂಗ್ (4) ಅವರನ್ನು ಸರಿಗಟ್ಟಿದರು. ಕುಮಾರ್ ಸಂಗಕ್ಕರ (5) ಅಗ್ರಸ್ಥಾನದಲ್ಲಿದ್ದಾರೆ.
2: ವಿರಾಟ್ ಕೊಹ್ಲಿ (119) ಏಕದಿನ ಕ್ರಿಕೆಟ್ನಲ್ಲಿ ಹೆಚ್ಚು ಬಾರಿ 50ಪ್ಲಸ್ ರನ್ ಪೇರಿಸಿದ ಕುಮಾರ್ ಸಂಗಕ್ಕರ (118) ಅವರನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಿದರು. ಸಚಿನ್ ತೆಂಡುಲ್ಕರ್ (145)ಮೊದಲ ಸ್ಥಾನದಲ್ಲಿದ್ದಾರೆ.
1. ರವೀಂದ್ರ ಜಡೇಜಾ ಏಕದಿನ ವಿಶ್ವಕಪ್ನ 18 ಇನಿಂಗ್ಸ್ಗಳಲ್ಲಿ ಮೊದಲ ಬಾರಿಗೆ 5 ವಿಕೆಟ್ ಕಬಳಿಸಿದರು.
9: ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ನಲ್ಲಿ ಸಾರ್ವಕಾಲಿಕ ಹೆಚ್ಚು ಶತಕ ಸಿಡಿಸಿದ ಸಚಿನ್ ತೆಂಡುಲ್ಕರ್ (49) ದಾಖಲೆಯನ್ನು ಸರಿಗಟ್ಟಿದರು. ವಿರಾಟ್ ಕೊಹ್ಲಿ 277 ಇನಿಂಗ್ಸ್ಗಳಲ್ಲಿ ಈ ಸಾಧನೆ ಮಾಡಿದರೆ, ತೆಂಡುಲ್ಕರ್ 452 ಇನಿಂಗ್ಸ್ಗಳಲ್ಲಿ ಸಾಧಿಸಿದ್ದರು.
3: ವಿರಾಟ್ ಕೊಹ್ಲಿ ಜನ್ಮದಿನದಂದೇ ಶತಕ ಸಿಡಿಸಿದ 3ನೇ ಭಾರತೀಯ ಒಟ್ಟಾರೆ 7ನೇ ಬ್ಯಾಟರ್. ಸಚಿನ್ ತೆಂಡುಲ್ಕರ್ (1998), ವಿನೋದ್ ಕಾಂಬ್ಳಿ (1993)ಮೊದಲಿಬ್ಬರು. ಹಾಲಿ ಆವೃತ್ತಿಯಲ್ಲಿ ಮಿಚೆಲ್ ಮಾರ್ಷ್ ಈ ಸಾಧನೆ ಮಾಡಿದ್ದಾರೆ.


