ಸೌತ್ ಆಫ್ರಿಕಾದ ಡರ್ಬನ್ನಲ್ಲಿ ಸಂಜು ಸ್ಯಾಮ್ಸನ್ ಶೋ ಸಖತ್ ಆಗಿತ್ತು. ಸಂಜು ಸ್ಯಾಮ್ಸನ್ ಸ್ಪೋಟಕ ಆಟಕ್ಕೆ ಸೌತ್ ಆಫ್ರಿಕಾ ಬೌಲರ್ಗಳು ಕಕ್ಕಾಬಿಕ್ಕಿಯಾಗಿಬಿಟ್ರು.
ಸಿಕ್ಸ್.. ಸಿಕ್ಸ್.. ಸಿಕ್ಸ್.. ಹೌದು, ಡರ್ಬನ್ನಲ್ಲಿ ನಿನ್ನೆ ಸಿಕ್ಸರ್ಗಳ ಸುರಿಮಳೆ ಸುರಿಯಿತು. ಒಂದಲ್ಲ.. ಎರಡಲ್ಲ.. ಬರೋಬ್ಬರಿ 10 ಸಿಕ್ಸರ್ಗಳು! ಇಡೀ ತಂಡದ್ದಲ್ಲ.. ಒಬ್ಬನೇ ಒಬ್ಬ ಸಿಡಿಸಿದ ಸಿಕ್ಸರ್ಗಳಿವು! ನಿನ್ನೆ ನಡೆದ ಸೌತ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗಿಳಿದ ಟೀಮ್ ಇಂಡಿಯಾ ಆರಂಭದಲ್ಲೇ ವಿಕೆಟ್ ಕಳೆದುಕೊಳ್ತು. ಓಪನರ್ ಅಭಿಶೇಕ್ ಶರ್ಮಾ 7 ರನ್ಗಳಿಸಿ ಔಟಾದರು. 3ನೇ ಕ್ರಮಾಂಕದಲ್ಲಿ ಕ್ರಿಸ್ಗೆ ಬಂದ ಸೂರ್ಯಕುಮಾರ್ ಯಾದವ್ ಅಬ್ಬರಿಸಿ ಮರೆಯಾದರು. 1 ಸಿಕ್ಸರ್, 2 ಬೌಂಡರಿ ಸಿಡಿಸಿದ ಸೂರ್ಯ 21 ರನ್ಗಳಿಸಿ ನಿರ್ಗಮಿಸಿದರು.
ಒಂದೆಡೆ ವಿಕೆಟ್ ಉರುಳ್ತಾ ಇದ್ರೆ, ಇನ್ನೊಂದೆಡೆ ಸೈಲೆಂಟ್ ಸ್ಟಾರ್ ಸಂಜು ಸ್ಯಾಮ್ಸನ್, ಫುಲ್ ವೈಲೆಂಟ್ ಆಗಿದ್ದರು. ಸೌತ್ ಆಫ್ರಿಕಾ ಬೌಲರ್ಗಳ ಬೆಂಡೆತ್ತಿದ ಸಂಜು, ಸಿಕ್ಸರ್ಗಳ ಮಳೆ ಸುರಿಸಿದರು. ಸಂಜು ಸ್ಯಾಮ್ಸನ್ ಆಟಕ್ಕೆ ಸೌತ್ ಆಫ್ರಿಕಾ ಬೌಲರ್ಗಳ ಬಳಿ ಆನ್ಸರೇ ಇರಲಿಲ್ಲ. ಕ್ಯಾಪ್ಟನ್ ಮರ್ಕರಮ್ಗೆ ಫೀಲ್ಡ್ ಪ್ಲೇಸ್ಮೆಂಟ್ ಮಾಡೋ ಟೆನ್ಶನ್ ಅನ್ನೋದು ಬರೆಲೇ ಇಲ್ಲ.. ಸಂಜು ಹೊಡೆದ ಶಾಟ್ಸ್ಗಳು ಎಲ್ಲಾ ಬೌಂಡರಿಯಾಚೆ ಹೋಗುತ್ತಿದ್ದವು.
ಡರ್ಬನ್ನಲ್ಲಿ 10 ಸಿಕ್ಸರ್ ಸಿಡಿಸಿ ಮಿಂಚಿದ ಸಂಜು ಸ್ಯಾಮ್ಸನ್ 7 ಕ್ಲಾಸಿಕ್ ಬೌಂಡರಿಗಳನ್ನೂ ಚಚ್ಚಿದ್ರು. ಬರೋಬ್ಬರಿ 214ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ ಸ್ಯಾಮ್ಸನ್ 47 ಎಸೆತಗಳಲ್ಲೇ ಸೆಂಚುರಿ ಸಿಡಿಸಿದರು. ಸಂಜು ಸ್ಯಾಮ್ಸನ್ಗೆ ಸಾಥ್ ಕೊಟ್ಟ ತಿಲಕ್ ವರ್ಮಾ 18 ಎಸೆತಗಳಲ್ಲೇ 33 ರನ್ ಚಚ್ಚಿದ್ರು. 3 ಬೌಂಡರಿ, 2 ಸಿಕ್ಸರ್ಗಳನ್ನ ಬಾರಿಸಿದರು. 33 ರನ್ಗಳಿಸಿ ತಿಲಕ್ ವರ್ಮಾ ಔಟಾದರೆ ಶತಕದ ಬೆನ್ನಲ್ಲೇ ಸಂಜು ಸ್ಯಾಮ್ಸನ್ ವಿಕೆಟ್ ಒಪ್ಪಿಸಿದರು. ಇದ್ರೊಂದಿಗೆ ಟೀಮ್ ಇಂಡಿಯಾ ಕುಸಿತ ಆರಂಭವಾಯ್ತು.