ಅಖಿಲ ಭಾರತ ಪಿಂಜಾರ /ನದಾಫ/ ಮನಸೂರಿ ಸಂಘಗಳ ಮಹಾಮಂಡಳಿದ
ತಾಲೂಕಾ ಘಟಕದ ಪದಾಧಿಕಾರಿಗಳ ಪದಗ್ರಹಣ ಹಾಗೂ ಉಚಿತ ಸದಸ್ಯತ್ವ ಅಭಿಯಾನ.
ಅಥಣಿ : ಪಿಂಜಾರ / ನದಾಫ ಸಮಾಜ ಎಂದರೆ ದುಡಿಮೆಯನ್ನು ನಂಬಿರುವ ಸಮಾಜ ಈ ಸಮಾಜದಲ್ಲಿರುವ ಹೆಚ್ಚಿನ ಜನ ಬಡವರಿದ್ದು ಗಾದಿಗಳನ್ನು ಮಾಡಿ ಬದುಕು
ಕಟ್ಟಿಕೊಳ್ಳುವವರಾಗಿದ್ದಾರೆ ಆ ಸಮಾಜಕ್ಕೆ ಸರ್ಕಾರ ಆದಷ್ಟು ಬೇಗನೆ ಪ್ರತ್ಯೇಕ ಮೀಸಲಾತಿ ಕಲ್ಪಿಸಬೇಕು ಎಂದು ಮಾಜಿ ಶಾಸಕ ಶಹಾಜಹಾನ ಡೊಂಗರಗಾಂವ ಸರ್ಕಾರವನ್ನು ಆಗ್ರಹಿಸಿದರು.
ಅವರು ಪಟ್ಟಣದ ನೂರಾನಿ ಹಾಲ್ ನಲ್ಲಿ ಅಖಿಲ ಭಾರತ ಪಿಂಜಾರ /ನದಾಫ/ ಮನಸೂರಿ ಸಂಘಗಳ ಮಹಾಮಂಡಳಿ ಹುಬ್ಬಳ್ಳಿಯ ವತಿಯಿಂದ ಅಥಣಿ ತಾಲೂಕ ಘಟಕದ ಪದಾಧಿಕಾರಿಗಳ ಪದಗ್ರಹಣ ಹಾಗೂ ಅಥಣಿ ತಾಲೂಕ ಘಟಕದ ಉಚಿತ ಸದಸ್ಯತ್ವ ಅಭಿಯಾನ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿ ಮಾತನಾಡುತ್ತಿದ್ದರು.
ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ನಮಗೆ ನೀಡಿರುವ ಸಂವಿಧಾನದ ಅಡಿಯಲ್ಲಿ ನಾವೆಲ್ಲರೂ ಬದುಕುತ್ತಿದ್ದೇವೆ ಈ ಸಂವಿಧಾನದಲ್ಲಿರುವ ನಮ್ಮ ಕರ್ತವ್ಯಗಳು ಹಾಗೂ ನಮ್ಮ ಹಕ್ಕುಗಳ ಬಗ್ಗೆ ಮೊದಲು ತಿಳಿದು ಕೊಳ್ಳಬೇಕು ಹಾಗೂ ಸಮಾಜಕ್ಕೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಸಮಾಜದ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಿ ಎಲ್ಲರಿಗೆ ಸೌಲಭ್ಯಗಳನ್ನು ಮುಟ್ಟಿಸುವಂತಾಗಬೇಕು ಎಂದ ಅವರು ಈ ಹಿಂದೆ ಮುಸ್ಲಿಂ ಸಮುದಾಯಕ್ಕೆ ಇರತಕ್ಕಂತಹ 2ಬಿ ಮೀಸಲಾತಿಯನ್ನು ಹಿಂದಿನ ಸರ್ಕಾರ ರದ್ದು ಮಾಡಿತ್ತು ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿದೆ ಇದುವರೆಗೆ 2ಬಿ ಮೀಸಲಾತಿ ವಿಷಯ ಎಥಾಸ್ಥಿತಿಗೆ ಬಂದಿಲ್ಲ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಪುನಃ ಮುಸ್ಲಿಂ ಸಮುದಾಯಕ್ಕೆ 2ಬಿ ಮೀಸಲಾತಿ ಕಲ್ಪಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಈ ವೇಳೆ ಅಖಿಲ ಭಾರತ ಪಿಂಜಾರ /ನದಾಫ/ ಮನಸೂರಿ ಸಂಘಗಳ ಮಹಾಮಂಡಳಿ ಹುಬ್ಬಳ್ಳಿ. ರಾಷ್ಟ್ರೀಯ ಅಧ್ಯಕ್ಷ ಫಕ್ರುದ್ದೀನ್ ಗೊರವನಕೊಳ್ಳ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಪಿಂಜಾರ/ನದಾಫ/ ಮನಸೂರಿ ಎಂದರೆ ಮುಸ್ಲಿಮ್ ಜನಾಂಗದಲ್ಲಿ ಅತಿ ಹಿಂದುಳಿದ ವರ್ಗ ನಮ್ಮ ಜನಾಂಗಕ್ಕೆ ಸರ್ಕಾರ ಪ್ರತೇಕ ಮೀಸಲಾತಿ ಕಲ್ಪಿಸಬೇಕು. ಇಲ್ಲಿಯವರೆಗೆ ನಾವು ಕೇವಲ ಮತ ಯಂತ್ರಗಳಾಗಿ ಪರಿವರ್ತನೆಯಾಗಿದ್ದೇವೆ ಹೊರತು ನಾವು ಇನ್ನೂ ಕೂಡ ಎಚ್ಚರವಾಗಿಲ್ಲ ನಮ್ಮ ಜನ ಅರಿತುಕೊಳ್ಳಬೇಕು ಗಾದಿ ವೃತ್ತಿಗಳನ್ನು ಮಾಡಿಕೊಂಡು ಅಲೆಮಾರಿ ಬದುಕನ್ನು ಬಾಳುತ್ತಿದ್ದು, ಅಂತಹವರ ಬಗ್ಗೆ ಸರ್ಕಾರ ಗಮನ ಹರಿಸಲಿ. ಅತ್ಯಂತ ಕಡು ಬಡತನದಲ್ಲಿರುವ ಪಿಂಜಾರ/ನದಾಫ/ಮನಸೂರಿ ಜನಾಂಗದ ಬದುಕನ್ನು ಹಸನಾಗಿಸಲು ಸರ್ಕಾರ ಒತ್ತು ನೀಡಬೇಕು. ಪಿಂಜಾರ ಸಮಾಜದಲ್ಲಿ ಬಡತನ ಆಳವಾಗಿ ಬೇರೂರಿದೆ. ಶಿಕ್ಷಣ ಮರೀಚಿಕೆಯಾಗಿದೆ. ಒಂದು ಕಡೆ ನೆಲೆ ನಿಲ್ಲಲು ಸರಿಯಾದ ಸೂರು ಸಹ ಇಲ್ಲದ ಸಮುದಾಯ ಇದಾಗಿದೆ. ಪಿಂಜಾರ, ನದಾಫ, ಮನಸೂರಿ. ಹೀಗೆ ನಾನಾ ಹೆಸರಿನಲ್ಲಿ ಕರೆಯಲ್ಪಡುವ ಸಮಾಜವನ್ನು ಮುಖ್ಯವಾಹಿನಿಗೆ ತರುವ ಕೆಲಸ ಸರ್ಕಾರ ಮಾಡಬೇಕು ಎಂದು ಅವರು ಮನವಿ ಮಾಡಿದರು.
ಸರ್ಕಾರದ ಸೌಲಭ್ಯ ವಂಚಿತ ಸಮಾಜ ಇದು. ಬಡತನ ನಿರ್ಮೂಲನೆಗಾಗಿ ಸಮಾಜ ಬಾಂಧವರು ಒಗ್ಗೂಡಿ ಹೋರಾಟಬೇಕು. ಎಲ್ಲದಕ್ಕಿಂತ ಮುಖ್ಯವಾಗಿ ಮೊದಲು ಸಂಘಟಿತರಾಗಬೇಕು. ತಮಗೆ ಎಷ್ಟೇ ಕಷ್ಟವಾದರೂ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವ ಮೂಲಕ ಸಮಾಜವನ್ನು ಶೈಕ್ಷಣಿಕವಾಗಿ ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕು.
ಎಲ್ಲರೂ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿದಾಗ ಮಾತ್ರ ನಾವು ಸರ್ಕಾರದ ಎಲ್ಲ ಸೌಲಭ್ಯಗಳನ್ನು ಪಡೆಯಲು ಸಾದ್ಯ ಮಕ್ಕಳಿಗಾಗಿ ಆಸ್ತಿ ಮಾಡಬೇಡಿ ಮಕ್ಕಳನ್ನು ಆಸ್ತಿಯನ್ನಾಗಿ ಮಾಡಿ ಎಂದು ತಿಳಿಸಿದರು. ಪಿಂಜಾರರು ಕೊಟ್ಟ ಮಾತಿನಂತೆ ನಡೆಯುವವರು ನಮ್ಮ ಬೇಡಿಕೆಗಾಗಿ ನಾವು ಒಗ್ಗಟಾಗಿ ಹೋರಾಡಬೇಕಿದೆ. ಒಗ್ಗಟಾಗಿ ಹೋರಾಡಿದಾಗ ಮಾತ್ರ ಯಶಸ್ಸು ಕಾಣಲು ಸಾದ್ಯ ಅಖಿಲ ಭಾರತ ಪಿಂಜಾರ, ನದಾಫ, ಮನಸೂರಿ ಸಂಘಗಳ ಮಹಾಮಂಡಳ ವತಿಯಿಂದ ಅಥಣಿ ತಾಲೂಕ ಘಟಕದ ಬೃಹತ್ ಉಚಿತ ಸದಸ್ಯತ್ವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ನಮ್ಮ ಸಮುದಾಯದ ಎಲ್ಲ ನಾಗರಿಕರೂ ಸಂಘಟನೆ ಯೊಂದಿಗೆ ಕೈ ಜೋಡಿಸಿ ಶಕ್ತಿ ತುಂಬುವ ಕೆಲಸ ಮಾಡಬೇಕಾಗಿದೆ ಎಂದರು.
ಇದೇ ಸಂದರ್ಭದಲ್ಲಿ ತಾಲೂಕಾ ಘಟಕದ ಪದಾಧಿಕಾರಿಗಳ ಪದಗ್ರಹಣ ಹಾಗೂ ಪದಾಧಿಕಾರಿಗಳ ಸನ್ಮಾನ ಕಾರ್ಯಕ್ರಮ ನಡೆಯಿತು.
ಈ ವೇಳೆ ಮುಸ್ಲಿಂ ಧರ್ಮ ಗುರುಗಳಾದ ಮೌಲಾನಾ ಅಬ್ಬಾಸ್. ಕಾಂಗ್ರೆಸ್ ಮುಖಂಡ ಅಸ್ಲಮ್ ನಾಲಬಂದ, ರಮಜಾನ ನದಾಫ, ಚಿಕ್ಕೋಡಿ ಜಿಲ್ಲಾ ಅಧ್ಯಕ್ಷ ರಾಜೇಸಾಬ ನದಾಫ, ಅಥಣಿ ತಾಲೂಕ ಅಧ್ಯಕ್ಷ ಬುರಾನಸಾಬ ನದಾಫ. ರಸೂಲ್ ನದಾಫ. ಗುಡೇಸಾಬ ನದಾಫ. ಉಮರಲಿ ನದಾಫ. ರಜೀಯಾಬೇಗಂ ಕೊಟಬಾಗಿ. ಬಂದೇನವಾಜ ನದಾಫ. ಸೈದುಸಾಬ ನದಾಫ. ಸೇರಿದಂತೆ ನದಾಫ ಸಮಾಜದ ಗುರು ಹಿರಿಯರು ಹಾಗೂ ಗಣ್ಯಮಾನ್ಯರು ಉಪಸ್ಥಿತರಿದ್ದರು.


