ಚಿಕ್ಕೋಡಿ: ನಿನ್ನೆ ಭಾನುವಾರ ಆದ ಕಾರಣ ಶಾಲೆಗೆ ರಜೆ ಇತ್ತು. ಹೀಗಾಗಿ ತಂದೆ ಮಕ್ಕಳು ಮೀನು ಹಿಡ್ಕೊಂಡು ಬರೋಣ ಎಂದು ಘಟಪ್ರಭೆಯ ಒಡಲೊಳಗೆ ಇಳಿದಿದ್ರು. ಆದ್ರೆ, ಅಷ್ಟರಲ್ಲಾಗಲೇ ಜಲಾಸುರನ ವಕ್ರದೃಷ್ಟಿ ಆ ತಂದೆ ಮಕ್ಕಳ ಮೇಲೆ ಬಿದ್ದಿತ್ತು. ಮೀನಿಗಾಗಿ ನೀರಿಗಿಳಿದವರು ಮತ್ತೆ ವಾಪಸ್ ಬರಲೇ ಇಲ್ಲ.
ಮೀನು ಹಿಡಿಯಲು ಹೋದ ತಂದೆ, ಮಕ್ಕಳು ನೀರುಪಾಲು
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆನಕನಹೊಳಿ ಗ್ರಾಮದ ನಿವಾಸಿ ತನ್ನ ಇಬ್ಬರು ಮಕ್ಕಳೊಂದಿಗೆ ಅದೇ ಗ್ರಾಮದಲ್ಲಿರೋ ಘಟಪ್ರಭಾ ನದಿಗೆ ಮೀನು ಹಿಡಿಲು ಇಳಿದಿದ್ರು. ಆದ್ರೆ, ಬಲೆ ಹಾಕೋಕೆ ನೀರಿಗಿಳಿದ ತಂದೆ ಮಕ್ಕಳು ವಾಪಸ್ ಬರಲೇ ಇಲ್ಲ. 45 ವರ್ಷದ ಲಕ್ಷ್ಮಣರಾಮ ಅಂಬಲಿ, 15 ವರ್ಷದ ರಮೇಶ್ ಅಂಬಲಿ, 13 ವರ್ಷದ ಯಲ್ಲಪ್ಪ ಅಂಬಲಿಯನ್ನ ಘಟಪ್ರಭೆಯಲ್ಲಿ ಜಲಾಸುರ ಅಪೋಶಣೆ ಪಡೆದುಬಿಟ್ಟಿದ್ದ.
ಜಲಪಾಶಕ್ಕೆ ಮೂವರು ಬಲಿ!
ಸಂಜೆ ಅಪ್ಪ, ಮಕ್ಕಳು ಮನೆಯಿಂದ ಬೈಕ್ನಲ್ಲಿ ಹೊರಟ್ಟಿದ್ದರು. ಬಳಿಕ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಸೇತುವೆ ಮೇಲೆ ಬೈಕ್ ನಿಲ್ಲಿಸಿದ್ದಾರೆ. ನಂತರ ತೆಪ್ಪದಲ್ಲಿ ಘಟಪ್ರಭಾ ನದಿಗೆ ಇಳಿದಿದ್ದ ತಂದೆ ಮಕ್ಕಳು, ಅರ್ಧ ಕಿಲೋ ಮೀಟರ್ ದೂರ ಹೋಗಿ ಬಲೆ ಹಾಕಿ ವಾಪಸ್ ಬರುವಾಗ ತೆಪ್ಪ ಮುಳುಗಿ ದುರ್ಘಟನೆ ಸಂಭವಿಸಿದೆ. ನಿನ್ನೆ ಸಂಜೆಯಿಂದ ಮೂವರು ನಾಪತ್ತೆಯಾಗಿದ್ರು, ಹುಡುಕಾಟ ನಡೆಸಿದ್ರು ಪತ್ತೆಯಾಗಿರಲಿಲ್ಲ. ಜಾತ್ರೆಗೆ ಹೋಗಿರಬಹುದು ಅಂದುಕೊಂಡು ಪತ್ನಿ ಸುಮ್ಮನಾಗಿದ್ದರು. ಆದ್ರೆ, ಬೆಳಗಾದ್ರೂ ಬರದೇ ಇದ್ದಾಗ ಕುಟುಂಬಸ್ಥರು ನದಿ ಬಳಿ ಬಂದು ನೋಡಿದ್ದಾರೆ. ಬದಿ ಹತ್ತಿರ ಬೈಕ್ ಮತ್ತು ಬಟ್ಟೆಗಳು ಪತ್ತೆಯಾಗಿದ್ದವು. ತಕ್ಷಣ ಯಮಕನಮರಡಿ ಪೊಲೀಸರಿಗೆ ಮಾಹಿತಿ ನೀಡಲಾಯ್ತು.
ಇನ್ನೂ, ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಯಮಕನಮರಡಿ ಠಾಣೆ ಪೊಲೀಸರು ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯ ಈಜು ತಜ್ಞರನ್ನ ಕರೆಸಿ ಶೋಧಕಾರ್ಯ ನಡೆಸಿದ್ದಾರೆ. ಬೆಳಗ್ಗೆಯಿಂದಲೂ ಹುಟುಕಾಡ ನಡೆಸಿದ್ದು, ಸಂಜೆ ವೇಳೆ ಇಬ್ಬರು ಮಕ್ಕಳ ಮೃತದೇಹ ಪತ್ತೆಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಎಸ್ ಪಿ ಡಾ. ಭೀಮಾಶಂಕರ್ ಗುಳೇದ್, ಯಾಕೆ ಈ ರೀತಿ ಆಗಿದೆ ಅನ್ನೋದರ ಕುರಿತು ತನಿಖೆ ನಡೆಸುವುದಾಗಿ ಹೇಳಿದ್ದಾರೆ.
ತಂದೆ ಜೊತೆ ಇಬ್ಬರೂ ಮಕ್ಕಳು ಕೂಡ ನೀರುಪಾಲಾಗಿದ್ದು, ಕುಟುಂಬಸ್ಥರು ಕಣ್ಣೀರಿಡ್ತಿದ್ದಾರೆ. ಪತಿ ಜೊತೆ ತನ್ನಿಬ್ಬರು ಮಕ್ಕಳು ಕೂಡ ನೀರುಪಾಲಾಗಿರೋದ್ಕಕ್ಕೆ ಹೆತ್ತೊಡಲಿಗೆ ದಿಕ್ಕೇ ತೋಚದಂತಾಗಿದೆ.