ಚಿಕ್ಕೋಡಿ: ದ್ವಿಚಕ್ರ ವಾಹನವೊಂದು ಸೇತುವೆ ಮೇಲಿಂದ ನದಿಗೆ ಬಿದ್ದು ದಂಪತಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ನೊಗಣಿಹಾಳ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ. ಸುರೇಶ ಬಡಿಗೇರ (53) ಜಯಶ್ರೀ ಬಡಿಗೇರ (45) ಮೃತರೆಂದು ಗುರುತಿಸಲಾಗಿದೆ.
ನೊಗಣಿಹಾಳ ಗ್ರಾಮದ ಘಟಪ್ರಭಾ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆಯಲ್ಲಿ ಘಟನೆ ನಡೆದಿದೆ. ಕಳೆದ ರಾತ್ರಿಯೇ ಜಯಶ್ರೀ ಅವರ ಶವ ಹಾಗು ಬೈಕ್ ಅನ್ನು ಹುಕ್ಕೇರಿ ಅಗ್ನಿಶಾಮಕ ದಳದ ಸಿಬ್ಬಂದಿ ಹೊರತೆಗೆದಿದ್ದಾರೆ. ಸುರೇಶ ಬಡಿಗೇರ ಶವಕ್ಕಾಗಿ ಹುಡುಕಾಟ ಮುಂದುವರೆದಿದೆ.
ಸೇತುವೆಗೆ ತಡೆಗೋಡೆ ಇರದೇ ಇರುವುದು ದುರ್ಘಟನೆಗೆ ಕಾರಣ ಎಂದು ಸ್ಥಳೀಯರು ಹೇಳಿದ್ದಾರೆ. ಸ್ಥಳಕ್ಕೆ ಬೆಳಗಾವಿ ಹೆಚ್ಚುವರಿ ಎಸ್ಪಿ ಶೃತಿ ಎಸ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.