ರಾಂಚಿ: ಪ್ರೀತಿಗೆ ವಯಸ್ಸು, ಗಡಿ ಅನ್ನೋದೇ ಇಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಲೇ ಇದೆ.
ಇತ್ತೀಚೆಗೆ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್ ಪಬ್ಜೀ ಪ್ರೇಮಿಗಾಗಿ (PUBG Lover) ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿರುವುದು ಇದಕ್ಕೆ ತಾಜಾ ಉದಾಹರಣೆಯಾಗಿದೆ. ಈ ಬೆನ್ನಲ್ಲೇ ಬಾಂಗ್ಲಾದೇಶದ ಯುವತಿಯು ಭಾರತದ ಪ್ರೇಮಿಗಾಗಿ ಭಾರತಕ್ಕೆ ಬಂದಿದ್ದಳು. ಇದೀಗ ಪೋಲೆಂಡಿನ ಮಹಿಳೆ (Polish Woman) ಸುದ್ದಿಯಲ್ಲಿದ್ದಾಳೆ.
ಇನ್ಸ್ಟಾಗ್ರಾಮ್ನಲ್ಲಿ (Instagram) ಪರಿಚಯವಾದ ಬಾಯ್ಫ್ರೆಂಡ್ಗಾಗಿ 49 ವರ್ಷದ ಮಹಿಳೆಯೊಬ್ಬಳು ಭಾರತಕ್ಕೆ ಬಂದಿದ್ದಾಳೆ. ತನ್ನ ಪ್ರೇಮಿಯನ್ನು ಮದುವೆಯಾಗಿ ಭಾರತದಲ್ಲೇ ಹೊಸ ಜೀವನ ಶುರು ಮಾಡಲು ಜಾರ್ಖಂಡ್ನ (Jharkhand) ಹಜಾರಿಬಾಗ್ಗೆ ಹಾರಿ ಬಂದಿದ್ದಾಳೆ. ಇದನ್ನೂ ಓದಿ: ಮತ್ತೊಂದು ಕೇಸ್ – ಪಬ್ಜಿ ಪ್ರೇಮಿಗಾಗಿ ಭಾರತಕ್ಕೆ ಹಾರಿ ಬಂದ ಬಾಂಗ್ಲಾದೇಶದ ಯುವತಿ!
ಇನ್ಸ್ಟಾಗ್ರಾಮ್ ಪ್ರೀತಿ ಶುರುವಾದ ರೀತಿ: ಪೋಲೆಂಡಿನ ಮಹಿಳೆ ಬಾರ್ಬಾರಾ ಪೊಲಾಕ್ ಹಾಗೂ ಜಾರ್ಖಂಡ್ನ ಹಜಾರಿಬಾಗ್ನ ಶಾದಾಬ್ ಮಲಿಕ್ 2021 ರಲ್ಲಿ ಇನ್ಸ್ಟಾಗ್ರಾಮ್ನಲ್ಲಿ ಪರಿಚಯವಾಗಿ ಸ್ನೇಹಿತರಾಗಿದ್ದಾರೆ. ಕೆಲವು ದಿನಗಳಲ್ಲೇ ಸ್ನೇಹ ಪ್ರೀತಿಗೆ ತಿರುಗಿದೆ. ಇಬ್ಬರೂ ಒಬ್ಬರನ್ನೊಬ್ಬರು ಬಿಟ್ಟಿರಲಾಗದಷ್ಟೂ ಪ್ರೀತಿಸಲು ಶುರು ಮಾಡಿದ್ದಾರೆ. ಬಳಿಕ ಪೊಲಾಕ್ ತನ್ನ 6 ವರ್ಷದ ಮಗಳು ಅನನ್ಯಾಳೊಂದಿಗೆ ಭಾರತಕ್ಕೆ ಹಾರಿಬಂದಿದ್ದು, ಹಜಾರಿಬಾಗ್ನಲ್ಲಿ ಪ್ರಿಯಕರ ಶಾದಾಬ್ ಜೊತೆ ನೆಲೆಸಿದ್ದಾಳೆ. ಪೊಲಾಕ್ ಪ್ರವಾಸಿ ವೀಸಾದಲ್ಲಿ ಭಾರತಕ್ಕೆ ಬಂದಿದ್ದು, ಅದು 2027ರ ವರೆಗೆ ಮಾನ್ಯವಾಗಿರುತ್ತದೆ. ಮದುವೆಗೆ ತಯಾರಿ: ಪೊಲಾಕ್ ಮತ್ತು ಮಲಿಕ್ ಇಬ್ಬರು ಮದುವೆಯಾಗಲು ತಯಾರಿ ಶುರು ಮಾಡಿದ್ದಾರೆ. ಹಜಾರಿಬಾಗ್ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್ಡಿಎಂ) ನ್ಯಾಯಾಲಯದಲ್ಲಿ ಮದುವೆಗೆ ಅರ್ಜಿ ಸಲ್ಲಿಸಿದ್ದಾರೆ. ಆಕೆ ಪತಿಯಿಂದ ವಿಚ್ಛೇದನ ಪಡೆದಿದ್ದಾಳೆ.
ಬಾರ್ಬಾರಾ ಅವರ ಮಗಳು ಈಗಾಗಲೇ ಶಾದಾಬ್ ಅನ್ನು ʻಅಪ್ಪʼ ಎಂದು ಕರೆಯಲು ಶುರು ಮಾಡಿದ್ದಾಳೆ ಎನ್ನಲಾಗಿದೆ. ಇದನ್ನೂ ಓದಿ: ಬೇಗ ಬಂದುಬಿಡು ಸೀಮಾ, ಹೊಸ ಜೀವನ ಶುರು ಮಾಡೋಣ – ಸೌದಿಯಲ್ಲಿ ಮೊದಲ ಪತಿಯ ಗೋಳಾಟ
ಈ ಸಂತಸವನ್ನು ಹಂಚಿಕೊಂಡಿರುವ ಪೊಲಾಕ್, ಶಾದಾಬ್ ತುಂಬಾ ಒಳ್ಳೆಯ ವ್ಯಕ್ತಿ ಎಂದಿದ್ದಲ್ಲದೇ, ಭಾರತವನ್ನು ಸುಂದರ ದೇಶ ಎಂದು ಹೊಗಳಿದ್ದಾಳೆ. ‘ನಾನು ಹಜಾರಿಬಾಗ್ಗೆ ಬಂದಾಗ, ಅನೇಕ ಜನರು ನನ್ನನ್ನು ನೋಡಲು ಬಂದರು. ನಾನು ಸೆಲೆಬ್ರಿಟಿ ಎಂದು ಭಾವಿಸಿದೆ. ನನಗೆ ಸ್ವಂತ ಮನೆ, ಕಾರು ಮತ್ತು ಒಳ್ಳೆಯ ಕೆಲಸವಿದೆ. ಆದ್ರೆ ನಾನು ಶಾದಾಬ್ಗಾಗಿ ಭಾರತಕ್ಕೆ ಬಂದಿದ್ದೇನೆ. ನಾನು ಅವನೊಂದಿಗೆ ತುಂಬಾ ಸಂತೋಷವಾಗಿದ್ದೇನೆ. ನಾವು ಶೀಘ್ರದಲ್ಲೇ ಮದುವೆಯಾಗಲಿದ್ದೇವೆ ಎಂದು ಬಾರ್ಬಾರಾ ಹೇಳಿಕೊಂಡಿದ್ದಾಳೆ.