ಜಮಖಂಡಿ: ಪಡಿತರ ಅಕ್ಕಿ ಕಳ್ಳ ಸಾಗಾಟನೆಗೆ ಕಮಿಷನ್ ಕೇಳಿದ ಬಸವರಾಜ್; ಲಾರಿ ಗುದ್ಧಿ ಮಟಾಷ ಮಾಡಿದ ಆಷ್ಪಾಕ್ ಮುಲ್ಲಾ!
ಜಮಖಂಡಿ ಬಳಿ ನಡೆದ ಅಪಘಾತ ಪ್ರಕರಣವು ವ್ಯವಸ್ಥಿತ ಕೊಲೆ ಎಂದು ತನಿಖೆಯಿಂದ ದೃಢಪಟ್ಟಿದೆ. ಪಡಿತರ ಅಕ್ಕಿ ಕಳ್ಳಸಾಗಣೆ ಡೀಲ್ನ ಹಣಕಾಸಿನ ವಿವಾದವೇ ಈ ಕೃತ್ಯಕ್ಕೆ ಕಾರಣವಾಗಿದ್ದು, ಪೊಲೀಸರು ಮುಖ್ಯ ಆರೋಪಿ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ಈ ಘಟನೆಯು ಅಕ್ರಮ ಅಕ್ಕಿ ದಂದೆಯ ಜಾಲವನ್ನು ಬಯಲು ಮಾಡಿದೆ.
ಬಾಗಲಕೋಟ (ಅ.10): ಜಮಖಂಡಿ ತಾಲ್ಲೂಕಿನ ಮಧುರಖಂಡಿ ಕ್ರಾಸ್ ಬಳಿ ಅಕ್ಟೋಬರ್ 8 ರಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಅಪರಿಚಿತ ವಾಹನ ಡಿಕ್ಕಿಯಾಗಿ ನಡೆದಿದ್ದ ಅಪಘಾತ ಪ್ರಕರಣವು ಇದೀಗ ಬಿಗ್ ಟ್ವಿಸ್ಟ್ ಪಡೆದುಕೊಂಡಿದೆ. ಮೋಲ್ನೋಟಕ್ಕೆ ಆಕಸ್ಮಿಕ ಅಪಘಾತದಂತೆ ಕಂಡಿದ್ದ ಈ ಘಟನೆ, ವಾಸ್ತವದಲ್ಲಿ ವ್ಯವಸ್ಥಿತ ಕೊಲೆ ಎಂಬುದು ತನಿಖೆ ವೇಳೆ ದೃಢಪಟ್ಟಿದೆ. ಪಡಿತರ ಅಕ್ಕಿ ಕಳ್ಳಸಾಗಣೆ (ಸ್ಮಗ್ಲಿಂಗ್) ಮಾಫಿಯಾದ ಡೀಲ್ ಒಂದರಲ್ಲಿನ ಹಣಕಾಸಿನ ವಿವಾದವೇ ಈ ಕೊಲೆಗೆ ಕಾರಣ ಎನ್ನಲಾಗಿದೆ.
ಮಾಫಿಯಾ ಡೀಲ್ ಜಗಳ ಕೊಲೆಯಲ್ಲಿ ಅಂತ್ಯ:
ಮೃತರನ್ನು ಬಸವರಾಜ ಕಾನಗೊಂಡ (40) ಎಂದು ಗುರುತಿಸಲಾಗಿದ್ದು, ಇವರು ಅಕ್ರಮ ಅಕ್ಕಿ ಕಳ್ಳಸಾಗಣೆ ಮಾಫಿಯಾದ ಬಲಿಪಶುವಾಗಿದ್ದಾರೆ. ಅಕ್ಕಿ ಸ್ಮಗ್ಲರ್ ಆಗಿರುವ ಮುಖ್ಯ ಆರೋಪಿ ಅಷ್ಪಾಕ್ ಮುಲ್ಲಾ ಜೊತೆಗೆ ಬಸವರಾಜ ಕಾನಗೊಂಡ ಅವರು ‘ಮಂಥ್ಲಿ ಕಮೀಷನ್’ (ಮಾಸಿಕ ಕಮಿಷನ್) ವಿಚಾರವಾಗಿ ಡೀಲ್ ಕುದುರಿಸಲು ಯತ್ನಿಸಿದ್ದರು. ಆದರೆ, ಈ ವ್ಯವಹಾರವು ಕುದುರದ ಕಾರಣಕ್ಕಾಗಿ ಇಬ್ಬರ ನಡುವೆ ಜಗಳ ನಡೆದಿತ್ತು.
ಈ ಘಟನೆಗೆ ಮುನ್ನ, ರಬಕವಿ ಮಹಿಷವಾಡಗಿ ಸೇತುವೆ ಬಳಿ ಅಕ್ಕಿ ದಂದೆಕೋರರೊಂದಿಗೆ ಬಸವರಾಜ್ ಕಾನಗೊಂಡ ಅವರು ಡೀಲ್ ಮಾತುಕತೆ ನಡೆಸಿದ್ದರು. ಡೀಲ್ ಬಗೆಹರಿಯದೆ ಅಷ್ಪಾಕ್ ಮತ್ತು ಬಸವರಾಜ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿತ್ತು. ಆಕ್ರೋಶಗೊಂಡಿದ್ದ ಅಷ್ಪಾಕ್ ಅಲ್ಲಿಂದ ಎದ್ದು ಹೋಗಿದ್ದನು. ನಂತರ, ಮಧ್ಯಸ್ಥಿಕೆ ವಹಿಸಿದ್ದವರೊಂದಿಗೆ ಪಾರ್ಟಿ ಮುಗಿಸಿ, ಬಸವರಾಜ ಅವರು ಸ್ಕೂಟರ್ನಲ್ಲಿ ವಾಪಸ್ ಮಧುರಖಂಡಿ ಮಾರ್ಗವಾಗಿ ಜಮಖಂಡಿಯತ್ತ ಬರುತ್ತಿದ್ದರು.
ಅಶೋಕ್ ಲೈಲ್ಯಾಂಡ್ ಗೂಡ್ಸ್ ವಾಹನ ಬಳಸಿ ಕೊಲೆ:
ಇದೇ ಸಮಯವನ್ನು ಬಳಸಿಕೊಂಡು, ಅಷ್ಪಾಕ್ ಮುಲ್ಲಾ ಮತ್ತು ಆತನ ಸಹಚರರು ಬಸವರಾಜ ಅವರನ್ನು ವ್ಯವಸ್ಥಿತವಾಗಿ ಕೊಲೆ ಮಾಡಲು ಸಂಚು ರೂಪಿಸಿದರು. ಅಕ್ರಮ ಅಕ್ಕಿ ಕಳ್ಳಸಾಗಣೆ ಮಾಡುತ್ತಿದ್ದಂತಹ KA-48 A-1732 ನಂ ನ ಲೈಲ್ಯಾಂಡ್ ಗೂಡ್ಸ್ ವಾಹನವನ್ನು ಬಳಸಿಕೊಂಡು, ಬಸವರಾಜ ಅವರ ಸ್ಕೂಟಿಗೆ ಡಿಕ್ಕಿ ಹೊಡೆಸಿ ಕೊಲೆ ಮಾಡಿದ್ದಾರೆ. ಇದು ಅಪಘಾತದ ರೀತಿಯಲ್ಲಿ ಕಾಣುವಂತೆ ಮಾಡಿ, ಪೊಲೀಸರ ಕಣ್ಣಿಗೆ ಮಣ್ಣೆರಚಲು ನಡೆಸಿದ ಪೂರ್ವನಿಯೋಜಿತ ಕೃತ್ಯವಾಗಿತ್ತು.
ಪೊಲೀಸರ ಸಂಶಯದಿಂದ ಭೇದಿಸಿದ ರಹಸ್ಯ:
ಮಧುರಖಂಡಿ ಕ್ರಾಸ್ ಬಳಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದ್ದನ್ನು ಕಂಡ ಜಮಖಂಡಿ ಗ್ರಾಮೀಣ ಠಾಣೆ ಪೊಲೀಸರಿಗೆ ಮೊದಲಿನಿಂದಲೂ ಇದು ಕೇವಲ ಅಪಘಾತವಲ್ಲ, ಇದರಲ್ಲಿ ಬೇರೆ ಯಾವುದೋ ಕೈವಾಡವಿದೆ ಎಂಬ ಸಂಶಯ ಮೂಡಿತ್ತು. ಪೊಲೀಸರು ಮೃತರ ಹಿನ್ನೆಲೆ ಮತ್ತು ಅಪಘಾತದ ಸ್ಥಿತಿಯನ್ನು ಕೂಲಂಕುಷವಾಗಿ ತನಿಖೆ ನಡೆಸಿದಾಗ, ಇದು ವ್ಯವಸ್ಥಿತ ಕೊಲೆ ಎಂಬ ಭಯಾನಕ ಸತ್ಯ ಹೊರಬಿದ್ದಿದೆ.
ನಾಲ್ವರ ಬಂಧನ:
ಕೊಲೆ ಪ್ರಕರಣ ಭೇದಿಸಿದ ಜಮಖಂಡಿ ಗ್ರಾಮೀಣ ಠಾಣೆ ಪೊಲೀಸರು, ಮುಖ್ಯ ಆರೋಪಿ ಅಷ್ಪಾಕ್ ಮುಲ್ಲಾ (ಅಕ್ಕಿ ಸ್ಮಗ್ಲರ್), ಸಹಚರರಾದ ನಂದೇಶ್ವರ ಪವಾಡಿ, ಮಹೇಶ್ ಪವಾಡಿ, ಹಾಗೂ ಅಷ್ಪಾಕ್ ಸಹೋದರ ಯುಸುಪ್ ಮುಲ್ಲಾ ಸೇರಿ ಒಟ್ಟು ನಾಲ್ವರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು, ಕೊಲೆಗೆ ಸಂಬಂಧಿಸಿದಂತೆ ಮತ್ತು ಅಕ್ರಮ ಅಕ್ಕಿ ದಂದೆಯ ಕುರಿತು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಬಾಗಲಕೋಟ ಜಿಲ್ಲೆಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಅಕ್ಕಿ ಕಳ್ಳಸಾಗಣೆ ಮಾಫಿಯಾದ ಮುಖವಾಡವನ್ನು ಈ ಕೊಲೆ ಪ್ರಕರಣವು ಬಯಲು ಮಾಡಿದೆ.