ಹೊಸದಿಲ್ಲಿ: ಯುದ್ಧ ಕೂಡಲೇ ನಿಲ್ಲಿಸಬೇಕೆಂದು ಆಗ್ರಹಿಸಿ ವಿಶ್ವ ಸಂಸ್ಥೆಯಲ್ಲಿ ಮಂಡಿಸಲಾದ ಪ್ರಸ್ತಾವದಿಂದ ಭಾರತ ದೂರ ನಿಂತದ್ದು ನಾಚಿಕೆಗೇಡಿನ ಸಂಗತಿ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಟೀಕಿಸಿದ್ದು ಮಹಾತ್ಮ ಗಾಂಧಿ ಹೇಳಿಕೆಯನ್ನು ಅವರು ಉದ್ಧರಿಸಿದರು.
ಕಣ್ಣಿಗೆ ಬದಲು ಕಣ್ಣೇ ಎಂಬ ರೀತಿಯಲ್ಲಿ ಮುಂದುವರಿದರೆ ಜಗತ್ತಿನಲ್ಲಿಡೀ ಕತ್ತಲು ಕವಿಯಬಹುದು ಎಂದು ಮಹಾತ್ಮಗಾಂಧಿ ಹೇಳಿದ್ದರು.
ಇದನ್ನು ಹಂಚಿಕೊಂಡು ಪ್ರಿಯಾಂಕಾ ಗಾಂಧಿ ಗಾಝಾದಲ್ಲಿ ಕದನ ವಿರಾಮವನ್ನು ಬಯಸಿ ಮಂಡನೆಯಾದ ಪ್ರಸ್ತಾವದಿಂದ ಭಾರತ ದೂರ ನಿಂತ ಕ್ರಮ ಅಪಮಾನಜನಕವೂ ಬೆಚ್ಚಿಬೀಳುವಂತಹದ್ದೂ ಆಗಿದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.
ಅಹಿಂಸೆ ಮತ್ತು ಸತ್ಯದ ತತ್ವಗಳಿಗೆ ಆದ್ಯತೆಯೊಂದಿಗೆ ನಮ್ಮ ದೇಶ ಸೃಷ್ಟಿಯಾಗಿದೆ. ಜೀವನವಿಡೀ ಈ ತತ್ವಗಳನ್ನು ಭಾರತದ ಸ್ವಾತಂತ್ರ್ಯ ಸಮಯ ಯೋಧರು ಮಾದರಿಯನ್ನಾಗಿ ಮಾಡಿದ್ದರು. ಭಾರತದ ನೈತಿಕ ಶಕ್ತಿಯನ್ನು ಅವರು ಪ್ರತಿನಿಧಿಸಿದ್ದಾರೆ.
ಆದರೆ ಎಲ್ಲ ಮಾನವೀಯ ಕಾನೂನು ಉಲ್ಲಂಘಿಸಿ ಗಾಝಾದಲ್ಲಿ ಯುದ್ಧ ನಡೆಸುತ್ತಿರುವುದನ್ನು ನಿಲ್ಲಿಸಬೇಕೆಂಬ ಪ್ರಸ್ತಾವ ವಿಶ್ವ ಸಂಸ್ಥೆಯಲ್ಲಿ ಮಂಡಿಸಲಾಗಿತ್ತು. ಭಾರತ ಈ ಪ್ರಸ್ತಾವನೆಯಿಂದ ದೂರ ನಿಂತಿದೆ.
ಆದರೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ 120 ಮತಗಳಿಂದ ಪ್ರಸ್ತಾವ ಪಾಸು ಆಗಿದೆ. ಅಮೆರಿಕ ಇಸ್ರೇಲ್ ಸಹಿತ 14 ದೇಶಗಳು ಪ್ರಸ್ತಾಪದ ವಿರುದ್ಧ ಮತ ಚಲಾಯಿಸಿದವು.
ಇಂಗ್ಲೆಂಡ್. ಜರ್ಮನಿ, ಯುಕ್ರೇನ್, ಆಸ್ಟ್ರೇಲಿಯ, ಇಟಲಿ, ಜಪಾನ್, ನೆದರ್ಲೆಂಡ್, ದಕ್ಷಿಣ ಕೊರಿಯ, ಭಾರತವು ಪ್ರಸ್ತಾವಕ್ಕೆ ಮತ ಹಾಕದೇ ದೂರ ನಿಂತ ರಾಷ್ಟ್ರಗಳಾಗಿವೆ. ಇದೇ ವೇಳೆ , ಅಮೆರಿಕ ಕೆನಡದ ಒತ್ತಡಕ್ಕೆ ಬಗ್ಗಿ ಹಮಾಸ್ ಹೆಸರು ಹೇಳಿ ಖಂಡಿಸಲು ಮತ್ತು ಕೈದಿಗಳನ್ನು ಬೇಗನೆ ಬಿಡುಗಡೆಗೊಳಿಸಬೇಕೆಂಬ ಇನ್ನೊಂದು ಪ್ರಸ್ತಾವ ಮಂಡಿಸಲ್ಪಟ್ಟಿದ್ದು, ಇದನ್ನು ಬೆಂಬಲಿಸಿ ಭಾರತ ಮತ ಚಲಾಯಿಸಿದೆ.


