ಬೆಳಗಾವಿಯಲ್ಲಿ ಸಿಸಿಬಿ ಪೊಲೀಸರ ಮಿಂಚಿನ ದಾಳಿ: ಮಟಕಾ ಅಡ್ಡೆ ಮೇಲೆ ರೈಡ್, ನಾಲ್ವರ ವಿರುದ್ಧ ಕೇಸ್ ದಾಖಲು!
• ಬೆಳಗಾವಿ ಸಿಸಿಬಿ ಪೊಲೀಸರಿಂದ ಮಟಕಾ ದಾಳಿ
• ಮೂವರು ಆರೋಪಿಗಳ ಬಂಧನ, ನಗದು ಜಪ್ತಿ
• ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
• ಮಟಕಾ ದಂಧೆಕೋರರಿಗೆ ಪೊಲೀಸ್ ಆಯುಕ್ತರ ಎಚ್ಚರಿಕೆ
ಬೆಳಗಾವಿ ನಗರದ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಮಟಕಾ ದಂಧೆಯ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಕಾರ್ಯಾಚರಣೆ ವೇಳೆ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು, ನಗದು ಹಾಗೂ ಓಸಿ ಚೀಟಿಗಳನ್ನು ಜಪ್ತಿ ಮಾಡಲಾಗಿದೆ.
ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯ ಖಂಜರ ಗಲ್ಲಿಯ ಹಳೆ ಮೊಡಕಾ ಬಜಾರ್ ಬಳಿ ಅಕ್ರಮವಾಗಿ ಮಟಕಾ ಜುಗಾರಿ ಆಡಿಸುತ್ತಿದ್ದ ಅಡ್ಡೆಯ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪಿಐ ಮಂಜುನಾಥ ನಾಯಕ ಮತ್ತು ಅವರ ತಂಡ ನಡೆಸಿದ ಈ ಕಾರ್ಯಾಚರಣೆಯಲ್ಲಿ ಅಶೋಕ ಪವಾರ, ಗಜಾನನ ಪಾಟೀಲ ಹಾಗೂ ಹವನ ಭಾತಖಾಂಡೆ ಎಂಬುವವರನ್ನು ಬಂಧಿಸಲಾಗಿದೆ. ಸಾರ್ವಜನಿಕರಿಂದ ಹಣ ಸಂಗ್ರಹಿಸಿ ‘ಶ್ರೀದೇವಿ ನೈಟ್ ಮೇನ್ ಬಜಾರ್’ ಹೆಸರಿನಲ್ಲಿ ಓಸಿ ಮಟಕಾ ಆಟವಾಡಿಸುತ್ತಿದ್ದಾಗ ಪೊಲೀಸರು ಈ ದಾಳಿ ಸಂಘಟಿಸಿದ್ದಾರೆ.
ಬಂಧಿತ ಆರೋಪಿಗಳಿಂದ ಪೊಲೀಸರು ಒಟ್ಟು 11,180 ರೂಪಾಯಿ ನಗದು ಹಣ ಹಾಗೂ ಮಟಕಾ ಚೀಟಿಗಳನ್ನು ವಶಪಡಿಸಿಕೊಂಡಿದ್ದಾರೆ. ವಿಚಾರಣೆ ವೇಳೆ ಸಂಗ್ರಹವಾದ ಹಣವನ್ನು ಬೆಳಗಾವಿಯ ಫಾಹೀಮ್ ಕೊತ್ವಾಲ ಎಂಬಾತನಿಗೆ ತಲುಪಿಸುತ್ತಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ನಾಲ್ವರ ವಿರುದ್ಧ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಸಮಯೋಚಿತ ದಾಳಿ ನಡೆಸಿ ದಂಧೆ ಬಯಲಿಗೆಳೆದ ಸಿಸಿಬಿ ತಂಡದ ಕಾರ್ಯವನ್ನು ಬೆಳಗಾವಿ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿ ಅವರು ಶ್ಲಾಘಿಸಿದ್ದಾರೆ.


